Sunday, March 16, 2008

ಆಧುನಿಕ ಪ್ರಸಂಗಗಳಿಂದ ಅಸಂತೃಪ್ತಿ ವ್ರತ್ತಿಯಿಂದ ಹವ್ಯಾಸಕ್ಕೆ - ಚಂದ್ರಶೇಖರ ಉಡುಪ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಮದ ವೆಂಕಟ್ರಮಣ ಉಡುಪ, ಮೀನಾಕ್ಷಮ್ಮ ದಂಪತಿಗಳ ಸುಪುತ್ರ ಚಂದ್ರಶೇಖರ ಉಡುಪ ವೈದಿಕ ಮನೆತನದಿಂದ ಯಕ್ಷಗಾನಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು. ಇವರು ಮೂಲತಃ ಕೃಷಿಕರು.
ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಪರೀಕ್ಷೆಯನ್ನು ಮುಗಿಸಿ, ಶೃಂಗೇರಿ ವೇದಪಾಠಶಾಲೆಯಲ್ಲಿ ವೇದವಿದ್ಯೆಯನ್ನು ಪೂರೈಸಿದ ಇವರನ್ನು ಕೈಬೀಸಿ ಕರೆದದ್ದು ಯಕ್ಷಗಾನ.
ಇವರ ಮನೆಯಲ್ಲಿ ಯಕ್ಷಗಾನದ ಪರಿಸರವಿತ್ತು. ತಂದೆ, ದೊಡ್ಡಪ್ಪ ಎಲ್ಲರೂ ಯಕ್ಷಗಾನಾಸಕ್ತರು. ಆರನೇ ತರಗತಿಯಲ್ಲಿ ಬಣ್ಣ ಹಚ್ಚಿ ಕುಣಿದ ಇವರು ಹಂತ ಹಂತವಾಗಿ ಯಕ್ಷಗಾನ ಅಭ್ಯಾಸವನ್ನು ಮಾಡಿದರು. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಮಾಲಿಕೆಯನ್ನು ಆಸಕ್ತಿಯಿಂದ ಆಲಿಸಿ ಪುರಾಣ ಜ್ಞಾನವನ್ನು ಗಳಿಸಿದರು. ಭಾಗವತ ಮಾಬಲಯ್ಯ ಹಾಗೂ ಉಳ್ತೂರು ಗಣಪತಿ ನಾಯ್ಕ ಮಾರ್ಗದರ್ಶನದಲ್ಲಿ ರಂಗ ಪ್ರವೇಶ ಮಾಡಿದರು.
ಹೆರಂಜಾಲು ವೆಂಕಟರಮಣ ಗಾಣಿಗ, ಗೋಪಾಲ ಗಾಣಿಗ ಇವರ ನೃತ್ಯ ಗುರುಗಳು. ನೀಲಾವರ ರಾಮಕೃಷ್ಣಯ್ಯರಿಂದ ಪದ್ಯಗಳ ಅಭ್ಯಾಸ, ಮಹಾಬಲ ಕಾರಂತರಿಂದ ಹಿಮ್ಮೇಳ ಜ್ಞಾನ ಮತ್ತು ರಂಗದ ಉಳಿದ ವಿಷಯಗಳ ಪರಿಜ್ಞಾನ ಪಡೆದರು.

ರಾಜಧಾನಿಯಲ್ಲಿ ಪ್ರದರ್ಶನ :
ಡಾ. ಕೋಟ ಶಿವರಾಮ ಕಾರಂತರ ನಿದರ್ೇಶನದಲ್ಲಿ, ರಾಜಧಾನಿ ದೆಹಲಿಯಲ್ಲಿ ನಡೆದ ಆಲಿಪ್ತ ಶೃಂಗಸಭೆಯಲ್ಲಿ ಭಾಗವಹಿಸಿ ದಿ. ಇಂದಿರಾಗಾಂಧಿಯವರಿಂದ ಮೆಚ್ಚುಗೆ ಪಡೆದುಕೊಂಡವರು ಇವರು. ದಿ. ರಾಮಕೃಷ್ಣ ಹೆಗಡೆಯವರೂ ಇವರ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದರು. ಪದ್ಮಭೂಷಣ ಕೃಷ್ಣಮಾಚಾರ್ಯರಿಂದ ಮಾರ್ಗದರ್ಶನ ಪಡೆದು ಹೊರರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದರು. ಬೇರೆ ರಾಜ್ಯಗಳ ಕಲಾ ಪ್ರಕಾರಗಳ, ವಿವಿಧ ಜಾನಪದ ಕಲೆಗಳ ವೀಕ್ಷಣೆಯಿಂದ ಅದರ ಪರಿಕಲ್ಪನೆಗಳು ಯಕ್ಷಗಾನದಲ್ಲಿ ಮೂಡಿಸಲು ಇವರು ಪ್ರಯತ್ನಿಸಿದರು.
ಬಿಳಲು ಕೊಪ್ಪ ಯುವಕ ರೈತ ಸಂಘದ ವತಿಯಿಂದ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಪ್ರಥಮ ಬಹುಮಾನಗಳನ್ನು ಇವರು ಪಡೆದಿದ್ದಾರೆ. ಬಾಳೆ ಹೊಳೆ ಮೇಳದಲ್ಲಿ ಹಳ್ಳದಾಚೆ ಶಾಮಯ್ಯ, ಹಳ್ಳದಾಚೆ ವೆಂಕಟ್ರಮಣಯ್ಯ ಇವರ ಮಾರ್ಗದರ್ಶನದಲ್ಲಿ ಇವರು ವೇಷಧಾರಿಯಾಗಿ, ತಾಳಮದ್ದಲೆ ಅರ್ಥಧಾರಿಗಳಾಗಿ ರೂಪುಗೊಂಡರು.
ತಿರುಗಾಟ :
ಬೈಂದೂರು ಕಳವಾಡಿ ಮೇಳದಿಂದ ತಿರುಗಾಟ ಆರಂಭ. ಆನಂತರ 2 ವರ್ಷ ನಾಗರಕೂಡಿಗೆಯ ಮೇಳ. ಇಲ್ಲಿ ಇವರು ಶ್ರೀರಾಮ, ಭೀಷ್ಮ, ಮಯೂರಧ್ವಜ, ಜಾಂಬವ, ವಿಕ್ರಮಾದಿತ್ಯ ಮುಂತಾದ ಪಾತ್ರಗಳಿಂದ ಜನಮನ್ನಣೆ ಗಳಿಸಿದರು. ಒಂದು ವರ್ಷ ಅಮೃತೇಶ್ವರಿಮೇಳದಲ್ಲಿ ತಿರುಗಾಟ, ಕಮಲ ಶಿಲೆಯ ಮೇಳದಲ್ಲಿ ಹರಿಶ್ಚಂದ್ರ, ಅಕ್ರೂರ, ಜಮದಗ್ನಿ, ದಶರಥ ಮುಂತಾದ ಪಾತ್ರಗಳಲ್ಲಿ ಮಿಂಚಿದರು. ಡೇರೆ ಮೇಳ ಸಾಲಿಗ್ರಾಮ ಮೇಳದಲ್ಲಿ 2 ವರ್ಷ ತಿರುಗಾಟ.
ಕೋಟ ವೈಕುಂಠ ನಾಯ್ಕ, ಕಮಲಶಿಲೆ ಮೇಳದ ಯಜಮಾನರಾದ ನಾರಾಯಣ ಶೆಟ್ಟಿ, ಶ್ರೀಕೃಷ್ಣ ಯಾಜಿ, ಕೊಂಡದ ಕುಳಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಇವರ ಒಡನಾಟ, ಸಹಕಾರ ಇವರಿಗೆ ಸದಾ ಸವಿನೆನಪು.
ಪೌರಾಣಿಕ ಪ್ರಸಂಗಗಳಲ್ಲಿ ಒಲವುಳ್ಳ ಇವರು ಆಧುನಿಕ ಪ್ರಸಂಗಗಳಿಂದ ಸಂತೃಪ್ತಿ ಹೊಂದದೆ ಉಪಜೀವನಕ್ಕೆ ಯಕ್ಷಗಾನ ವೃತ್ತಿ ಸರಿಯಲ್ಲ ಎಂದು ತೀಮರ್ಾನಿಸಿ ಈಗ ಹವ್ಯಾಸಿ ಕಲಾವಿದರಾಗಿ ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ.
ವಿಳಾಸ :
ಕೆ.ವಿ.ಚಂದ್ರಶೇಖರ ಉಡುಪ
ಬಿಳಾಲು ಕೊಪ್ಪ ಅಂಚೆ
ಕೊಪ್ಪ ತಾಲೂಕು
ಚಿಕ್ಕಮಗಳೂರು ಜಿಲ್ಲೆ.

No comments: